Thursday, 18 April 2013

ಮತ್ತೆ ಮಗುವಾಗಬೇಕು :-)ಅಂಬೆಗಾಲಿಟ್ಟು ಸವರಿ ಅಂಗಳ ಗುಡಿಸಬೇಕು
ತಿಂಗಳ ಬೆಳಕಲಿ ತಂಗಾಳಿ ಏರಿ
ಬಾನ ಚಂದಿರನಿಗೆ ತುತ್ತಿಡಬೇಕು

ಕಣ್ಣಮುಚ್ಹಾಲೆಯಲಿ ಅಡಗಿ ಕುಳಿತುಕೊಳ್ಳಬೇಕು
ಆಲದ ಮರಕ್ಕೆ ಕಟ್ಟಿ ಬಿಟ್ಟ
ಉಯ್ಯಾಲೆ ಏರಿ ತೂಗಾಡಬೇಕು

ಅಂಬರವ ನೋಡಿ-ಹಾಡಿ
ಮಳೆರಾಯನ ಕರೆದು -
ಹೂ-ಬಾಳೆ ತೋಟಕೆ ನೀರುಣಿಸಬೇಕು

ಹಸಿರು ಚ್ಚಪ್ಪರದಡಿ ಅರಿಶಿಣ-ಕುಂಕುಮವಿಟ್ಟು
ಸಂಜೆ ಸೋಬಾನೆ ಪದ ಹಾಡಿ
ಗೌರಿ ಕಲ್ಯಾಣ ಮುಗಿಸಬೇಕು

ಜೋಡಿ ಆಟದಲಿ ಕಳೆದ ಕುದುರೆ ನೆನೆದು
ಮತ್ತೊಮ್ಮೆ ಅವಳ (ಅಮ್ಮ) ಬಿಗಿದಪ್ಪಿ
ಬಿಕ್ಕಿ ಬಿಕ್ಕಿ ಮಗುವಾಗಿ ನಾ-ಅಳಬೇಕು....!!!

-ನಗೆ ಮಲ್ಲಿಗೆ
--