Monday, 3 August 2015

ನನ್ನದೇ ಕೋಣೆ


ಕೋಣೆಯ ಬಿಳಿ ಛಾವಣಿ
ಗಹಗಹಿಸಿ ನಗುತಿದೆ
ಬಣ್ಣ ಬಣ್ಣದ ಗೋಡೆಗಳು
ಕೇಕೆ ಹಾಕಿ ಅಣಕಿಸುತ್ತಿವೆ

ಪಕ್ಕದ ಛೇರು,ಟಿಪಾಯಿ,
ಬೀರು, ಕಿಟಕಿ ಎಲ್ಲವೂ ಸ್ಥಬ್ದವಾಗಿವೆ
ಚಲ್ಲಾ ಪಿಲ್ಲಿ ಆದ ಬಟ್ಟೆಗಳು
ಪ್ಯಾನಿನ ಗಾಳಿಗೆ ಬಳಿಬಂದು ಮೈಸವರಿ
ಸಂತೈಸುತಿವೆ ಸಂತಾಪ ಸೂಚಿಸಿ

ಮೇಲೆ ಮೂಲೆಯಲ್ಲಿಟ್ಟ
ಕೂಡೆ, ಮಳೆಗಾಲ ಬಂದರೂ
ಮೈತೊಳೆಯದೆ ಇರಿಸಿಹೆ ಎಂದು
ಹಿಡಿ ಶಾಪ ಹಾಕುತಿದೆ

ಮುಖವಾಡ ತೊಟ್ಟ ಆ ಕ್ರೂರಿ
ಮನುಷ್ಯನ ನಿಜರೂಪ ಕಂಡು
ಬಿಕ್ಕಳಿಸಲಾಗದೆ ಬಿಗಿ ಹಿಡಿದ
ತುಟಿಗಳ ನೋಡಿ ಕನ್ನಡಿ ಚೀರುತಿದೆ

ಅರೆ ಎಲ್ಲವು ನನ್ನ ಕೋಣೆಯ
ವಸ್ತುಗಳೆ!!! ಬಗೆಬಗೆಯ ಭಾವಗಳ
ಬಿತ್ತರಿಸುತಿವೆ, ಇವಾವು ನಿರ್ಜೀವಿಗಳಲ್ಲ
ಈಗ ತಾನೆ ಮಾತಾಡಲು ಶುರು ಮಾಡಿದ
ಮೂಖ ಪ್ರೇಕ್ಷಕರೇನೂ!!!!

ಇಲ್ಲಿವರೆಗೆ ಸುಮ್ಮನೆ ಕುಳಿತು
ನನ್ನೆಲ್ಲಾ ಭಾವನೆಗಳ ತೂಕಡಿಕೆಗೆ
ಸೋಬಾನೆ ಹಾಡಿದ ವಸ್ತುಗಳೆ ಇವೆಲ್ಲಾ
ಇಂದು ಬಡಿದೆಬ್ಬಿಸಿ ಬಿಂಕಿಸುತಿವೆ!!!!!

- ನಗೆಮಲ್ಲಿಗೆ

No comments:

Post a Comment